ತಡೆಯೋಟ -
ಪ್ರೇಕ್ಷಕರಿಗೆ ಹೆಚ್ಚಿನ ಮನೋರಂಜನೆಯನ್ನು ಉಂಟುಮಾಡುವ ವಿಶೇಷ ಬಗೆಯ ಓಟ (ಹರ್ಡಲ್ಸ್). ಹೆಸರೇ ತಿಳಿಸುವಂತೆ ಇಂಥ ಓಟಗಳಲ್ಲಿ ಭಾಗವಹಿಸುವ ಕ್ರೀಡಾಪಟು ಅನೇಕ ತಡೆಗಳನ್ನು ದಾಟಿಕೊಂಡು ತನ್ನ ಓಟವನ್ನು ಮುಂದುವರಿಸಬೇಕಾಗುತ್ತದೆ. ಸಾಮಾನ್ಯವಾಗಿ ಇಂಥ ಓಟದ ಸ್ಪರ್ಧೆಗಳಲ್ಲಿ ಬಳಸುವ ತಡೆಗಳಲ್ಲಿ ಮರದ ಚೌಕಟ್ಟು, ತಡಕೆ ಮುಂತಾದವು ಇರುತ್ತವೆ. ಇವನ್ನು ಕ್ರೀಡಾಪಥ ಮಧ್ಯದಲ್ಲಿ, ನಿರ್ದಿಷ್ಟ ಅಂತರಗಳಲ್ಲಿ ಇರುವಂತೆ ಜೋಡಿಸಿರುತ್ತಾರೆ. ಸ್ಪರ್ಧಿಗೆ ಮುಖ್ಯವಾಗಿ ವೇಗವಾಗಿ ಓಡುವ, ದೇಹದ ಮೇಲೆ ಹತೋಟಿಯನ್ನಿಟ್ಟುಕೊಂಡು ಸಲೀಸಾಗಿ ತಡೆಯ ಮೇಲೆ ಹಾರುವ, ನೆಗೆಯುವ ಸಾಮಥ್ರ್ಯ- ಇವು ಇರಬೇಕು. ಸಾಮಾನ್ಯವಾಗಿ, ಓಡುತ್ತ ಬಂದು ತಡೆಗಳನ್ನು ಸಮೀಪಿಸಿ ಅವನ್ನು ಹಾರುವಾಗ ಆತ ತನ್ನ ಮಂಡಿಯನ್ನೆತ್ತಿ ಉದ್ದನೆಯ ಹೆಜ್ಜೆ ಹಾಕುತ್ತಾನೆ. ಆಗ ಅವನ ಸೊಂಟದ ಮೇಲಿರುವ ದೇಹ ಭಾಗ ಮುಂದಕ್ಕೆ ಬಾಗುತ್ತದೆ. ಬಾಗಿದ ದೇಹವನ್ನು ಸಮತೋಲನದಲ್ಲಿರಿಸಲು ತನ್ನ ಒಂದು ಕೈಯನ್ನು ಮುಂದೆ ಚಾಚುತ್ತಾನೆ. ಇನ್ನೊಂದು ಕೈ ಹಿಂದೆ ಚಾಚಿರುತ್ತದೆ. ಈ ಪರಿಸ್ಥಿತಿಯಲ್ಲಿ ತನ್ನ ಹಿಂದಿನ ಕಾಲನ್ನು ಎತ್ತಿ ತಡೆಯನ್ನು ದಾಟುತ್ತಾನೆ. ಇದು ಯಾವುದೇ ತಡೆಯನ್ನು ದಾಟುವ ಕ್ರಮ.

	ಮಕ್ಕಳಿಗಾಗಿ ಏರ್ಪಡಿಸುವ ತಡೆಯೋಟ ಸ್ಪರ್ಧೆಗಳಲ್ಲಿ ಅವರು ಸ್ವಲ್ಪ ದೂರ ಓಡಿದ ಮೇಲೆ ಅವರ ಕೈಗೆ ಬಾಳೆಯ ಹಣ್ಣನ್ನೊ ಇಲ್ಲವೆ ಕಾಗದ ಸುತ್ತಿರುವ ಚಾಕೋಲೇಟನ್ನೂ ಕೊಡುತ್ತಾರೆ. ಇದರಲ್ಲಿ ಯಾರು ಎಷ್ಟು ಬೇಗ ಅವನ್ನು ತಿಂದು ಮುಂದೆ ಮತ್ತೆ ಓಡುತ್ತಾರೆ ಎಂಬುದನ್ನು ತಿಳಿಯುವುದೇ ಇದರ ಗುಟ್ಟು. ಇದೇ ರೀತಿ ಕ್ರೀಡಾ ಪಥದುದ್ದಕ್ಕೂ ಅನೇಕ ಬಗೆಯ, ಅವರವರಿಗೆ ಸರಿಹೊಂದುವಂಥ ಪದಾರ್ಥಗಳನ್ನಿರಿಸಿ, ಆಯಾ ಕೆಲಸಗಳನ್ನು ಪೂರೈಸಿಕೊಂಡು ಮತ್ತೆ ಓಡಿ ನಿರ್ದಿಷ್ಟ ಗುರಿಯನ್ನು ತಲುಪುವುದರಲ್ಲಿ ಯಾರು ಜಯಗಳಿಸುತ್ತಾರೆ ಎಂಬುದನ್ನು ತಿಳಿಯಲಾಗುತ್ತದೆ. ಪಥದ ನಡುವೆ ಬೆಂಚುಗಳನ್ನು ಇಟ್ಟು ಅವನ್ನು ಹಾರಿಸುವುದು, ಮೇಜಿನ ಕೆಳಗೆ ನುಗ್ಗಿಕೊಂಡು ಹೋಗುವಂತೆ ಮಾಡುವುದು, ರಗ್ಗಿನ ಕೆಳಗೆ, ಡ್ರಮ್ಮಿನ ಮುಖಾಂತರ - ಹೀಗೆ ಹಲವಾರು ರೀತಿಯ ತಡೆಗಳನ್ನು ಒಡ್ಡಿ ಸ್ಪರ್ಧೆಯನ್ನು ನಡೆಸುವುದೂ ಉಂಟು. ಓಟದ ಸ್ಪರ್ಧೆಯಂತೆಯೇ ಇಲ್ಲೂ 100 ಮೀಟರ್ ಹರ್ಡಲ್ಸ್, 110 ಮೀಟರ್ ಹರ್ಡ್‍ಲ್ಸ್, 400 ಮೀಟರ್ ಹರ್ಡ್‍ಲ್ಸ್, 2000 ಮೀಟರ್ ಸ್ಟೀಪ್ಲ್ ಚೇಸ್ ಮುಂತಾದ ಪ್ರಭೇದಗಳು ಇವೆ. ಸಾಮಾನ್ಯವಾಗಿ ಮಹಿಳೆಯರಿಗಾಗಿ 100 ಮೀಟರ್ ಹರ್ಡ್‍ಲ್ಸ್ ಮೀಸಲು.

	ವಿವಿಧ ರೀತಿಯ ಹತ್ತು ಅಥ್ಲೆಟಿಕ್ ಕ್ರೀಡೆಗಳ ಸಮೂಹ ಸ್ಪರ್ಧೆಯಾಗಿರುವ ಡೆಕಾತ್ಲಾನ್‍ನಲ್ಲಿ (ನೋಡಿ- ಡೆಕಾತ್ಲಾನ್) ತಡೆಯೋಟ ಸ್ಪರ್ಧೆಯೂ ಒಂದು. ಈ ಸ್ಪರ್ಧೆಗಳು ಇಂಗ್ಲೆಂಡ್, ಸೋವಿಯೆತ್ ದೇಶ, ಅಮೆರಿಕ ಸಂಯುಕ್ತ ಸಂಸ್ಥಾನ ಮುಂತಾದೆಡೆಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಸಾಮಾನ್ಯವಾಗಿ, ಬೇರೆ ಬೇರೆ ಕ್ರೀಡಾಪಥಗಳಲ್ಲಿ, ಒಂದೇ ಸಾಲಿನಲ್ಲಿ ಸ್ಪರ್ಧಿಗಳನ್ನು ನಿಲ್ಲಿಸಿ, ಆಟವನ್ನು ಪ್ರಾರಂಭಿಸುವುದಿದೆಯಾದರೂ ಹಂತ ಹಂತಗಳಲ್ಲಿ ಅಂದರೆ ಒಂದು ಸಾಲು ಸ್ಪರ್ಧಿಗಳ ಹಿಂದೆ ಮತ್ತೊಂದು ಸಾಲು ಸ್ಪರ್ಧಿಗಳು - ಹೀಗೆ ನಿಲ್ಲಿಸಿ ಆಟ ಪ್ರಾರಂಭಿಸುವುದೂ ಉಂಟು.
(ಟಿ.ಆರ್.ಎಸ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ.)